Thursday, 7 November 2013

ನಮ್ಮಿಬ್ಬರ ನಡುವೆ ಮೌನವೇ ಮಾತಾಗಿತ್ತು

                                
                "ಹ್ಞಂ..... ಥ್ಯಾಂಕ್ಸ್", ಆತ ಸಣ್ಣದಾಗಿ ಮುಗುಳ್ನಗುತ್ತಾ ಹೇಳಿದ. ನನ್ನ ಅಭಿನಂದನೆಗೆ
ಉತ್ತರವಾಗಿ.
                ಅಲ್ಲಿ ಮತ್ತೆ ಮೌನ ಹೆಪ್ಪುಗಟ್ಟಿತು. ಮುಂದೇನು ಮಾತಾಡಬೇಕೆನ್ನುವುದು ಇಬ್ಬರಿಗೂ ದೊಡ್ಡ
ಪ್ರಶ್ನೆಯಾಗಿ ಕಾಣುತ್ತಿತ್ತು. ಗೋಪಾಲಕೃಷ್ಣ ದೇವಾಲಯದ ಎದುರಿಗಿನ ದೇವರ ಹೊಳೆಯ ದಡದಲ್ಲಿನ
ಕಟ್ಟೆಯ ಮೇಲೆ ಎದುರುಬದುರಾಗಿ ಕುಳಿತಿದ್ದ ನಮ್ಮಿಬ್ಬರ ಮನದ ಕೊಳದಲ್ಲೂ ಹೇಳಲಾಗದ ಒಂದು
ಬಗೆಯ ಉದ್ವೇಗ - ಉತ್ಸಾಹಗಳ ಅಲೆಗಳು ಒಮ್ಮೆಲೇ ಎದ್ದು ಮರುಕ್ಷಣದಲ್ಲೇ ಮಾಯವಾಗಿ
ಆಟವಾಡುತ್ತಿದ್ದವು. ಹೊಳೆಯ ಹರಿವಿನ ಜುಳುಜುಳು ಸದ್ದು, ತಮ್ಮ ತಮ್ಮ ಗೂಡಿಗೆ ಮರಳುತ್ತಿರುವ
ಹಕ್ಕಿಗಳ ಕಲರವ, ಸಾಯಂಕಾಲವೆಲ್ಲ ತಮ್ಮದೇ ಎನ್ನುವಂತೆ ಚೀರುವ ಜೀರುಂಡೆಗಳ ಸಂಗೀತ, ಅನತಿ
ದೂರದಲ್ಲೇ ಇರುವ ರೋಡಿನಲ್ಲಿ ಚಲಿಸುವ ವಾಹನಗಳ ಭರಾಟೆ - ಇವೆಲ್ಲವೂ ನಮ್ಮಿಬ್ಬರ ನಡುವಿನ
ಮೌನ ಸಂಭಾಷಣೆಯನ್ನು ಆಸ್ವಾದಿಸುತ್ತಿರುವಂತೆ ತೆರೆಯ ಹಿಂದೆ ಸರಿದು ಕುಳಿತಂತಿದ್ದವು. ಒಂದು
ಬಗೆಯ ಅನಿರ್ವಚನೀಯ ಮೌನ ಆ ಮುಸ್ಸಂಜೆಯ ವೇದಿಕೆ ಮೇಲೆ ಲಾಸ್ಯವಾಡುತ್ತಿತ್ತು.
                 ಅಲ್ಲೇನೂ ಮಾತಿಗೆ ಬರವಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ಹೃದಯದಾಳದಲ್ಲೇ ಗೋಪುರ
ಕಟ್ಟಿದ್ದ ಸಾವಿರ ಕನಸುಗಳು, ಹಂಚಿಕೊಳ್ಳಬೇಕೆಂದಿದ್ದ ನೂರಾರು ಭಾವಗಳು, ವಿರಹದ ಬೇಗೆಯಲ್ಲೇ
ಬೆಂದು ಬಾಡಿ ಹೋಗಿದ್ದ ತುಡಿತ-ಮಿಡಿತಗಳು ಎಲ್ಲವೂ ಮಾತಿನ ರೂಪದಲ್ಲಿ ಹೊರಹೊಮ್ಮಲು
ತವಕಿಸುತ್ತಿದ್ದರೂ, ನಾಲಿಗೆಯ ತುದಿಯ ತನಕ ಮಾತ್ರ ತಲುಪಿ ತುಟಿಗಳ ಮೇಲೆ ಬರಲಾರೆನೆಂದು
ಚಿಕ್ಕಮಕ್ಕಳಂತೆ ಹಠ ಮಾಡುತ್ತಿದ್ದವು. ಅನಿರೀಕ್ಷಿತವಾಗಿ ಭೇಟಿಯಾದ್ದರಿಂದ ಅಮ್ಮೆಲೇ ಮೂಡಿದ
ಮಿಶ್ರಭಾವನೆಗಳ ಗೋಡೆಯು ಮಾತುಗಳ ಹರಿವಿಗೆ ಅಣೆಕಟ್ಟಿನಂತೆ ತಡೆಯಾಗಿ ನಿಂತಿತ್ತೇ ಎಂದು
ಯೋಚಿಸುವಂತಾಯಿತು.
              ಒಮ್ಮೆ ಆತ ಭೇಟಿಯಾದರೆ ಏನೇಲ್ಲ ಕೇಳಬೇಕು ಎಂದು ಪ್ರತಿದಿನವೂ ಹೊಸ ಹೊಸ ಪ್ರಶ್ನೆಗಳ
ಪಟ್ಟಿಯನ್ನು ತಯಾರಿಸುತ್ತಿದ್ದ ನಾನು ಅಂದು ಆತನ ಎದುರು ಮೌನಗೌರಿಯಾಗಿ ಕುಳಿತಿದ್ದೆ. ಆ ಕ್ಷಣದಲ್ಲಿ
ನನ್ನಲ್ಲಿನ ಭಾವಗಳ ಹೊಯ್ದಾಟಕ್ಕೆ ರೂಪ ನೀಡಲೇನೋ ಎಂಬಂತೆ ನನ್ನ ಬಲಗೈ ಕಟ್ಟೆಯ ಪಕ್ಕದಲ್ಲಿನ
ಹುಲ್ಲುಗಳನ್ನು ಕಿತ್ತುತ್ತಾ ಚಿತ್ತಾರ ಮೂಡಿಸಲು ಪ್ರಯತ್ನಿಸುವಂತಿತ್ತು. ಅವನ ಸ್ಥಿತಿಯೂ ಇದಕ್ಕೆ
ಹೊರತಾಗಿರಲಿಲ್ಲ. ಕೆಲವೊಮ್ಮೆ ಹೊಳೆಯ ಕಡೆ, ಇನ್ನು ಕೆಲವೊಮ್ಮೆ ಆಗಸವನ್ನು ಚುಂಬಿಸಲು
ಹೊರಟಿದ್ದ ಮರಗಳ ಕಡೆ ಚಲಿಸುತ್ತಿದ್ದ ಅವನ ಕಂಗಳು ಹೊಸ ಬಗೆಯ ಕವಿತೆಯೊಂದನ್ನು
ಹೊಸೆಯುತ್ತಿರುವಂತೆ ತೋರುತ್ತಿದ್ದವು. ನಮ್ಮಿಬ್ಬರ ಈ ತೊಳಲಾಟಕ್ಕೆ ಸಾಕ್ಷಿಯಾಗಿದ್ದ ಪ್ರಕೃತಿ ದೇವಿ
ಅದೆಷ್ಟು ಬಾರಿ ನಕ್ಕಳೋ ಏನೋ.
                ಚಳಿಗಾಲದ ದಿನವಾಗಿದ್ದರಿಂದ ನಿಧಾನವಾಗಿ ಕತ್ತಲೆ ಎಲ್ಲ ದಿಕ್ಕುಗಳಿಂದ ಆವರಿಸುತ್ತ ನಿಶೆಯ
ಆಗಮನವನ್ನು ಸಾರತೊಡಗಿತ್ತು. ಸಮಯ ಕೂಡ ೬.೩೦ ರ ಹತ್ತಿರ ಹತ್ತಿರದಲ್ಲಿತ್ತು.
"ಸಂಜೆಯಾಯಿತಲ್ಲವೇ, ಇನ್ನು ಹೊರಡೋಣ", ಎನ್ನುತ್ತಾ ಆತ ಎದ್ದು ನಿಂತ. ನಾನು ಹುಲ್ಲು
ಕೀಳುವುದನ್ನು ಬಿಟ್ಟು ಮೇಲೆದ್ದೆ. "ತಡವಾದರೆ ಮನೆಯ ಹಾದಿ ಕಾಣಲಿಕ್ಕಿಲ್ಲ. ಮತ್ತೊಮ್ಮೆ
ಭೇಟಿಯಾದಾಗ ಮಾತನಾಡೋಣ". ಆತನ ಈ ಮಾತಿಗೆ ಉತ್ತರವಾಗಿ ನಾನು ಬರೀ ಮುಗುಳ್ನಕ್ಕೆನಷ್ಟೆ.
ಇಬ್ಬರೂ ಚಪ್ಪಲಿಗಳನ್ನು ಹಾಕಿಕೊಳ್ಳುತ್ತಾ ಮನೆಯ ಹಾದಿಯ ಕಡೆ ಹೊರಳುತ್ತ ನಾಲ್ಕು ಹೆಜ್ಜೆ
ಸಾಗುವಷ್ಟರಲ್ಲಿಯೇ ಆತ ನನ್ನ ಹೆಸರನ್ನೊಮ್ಮೆ ಮೃದುವಾಗಿ ಕರೆದಂತಾಯಿತು. ನಾನು ಹಿಂತಿರುಗಿ ಏನು
ಎಂಬಂತೆ ಆತನತ್ತ ನೋಡಿದೆ. "ನಿನ್ನನ್ನು ಮನೆಯ ತನಕ ತಲುಪಿಸಿ ಆಮೇಲೆ ನಾನು ಮನೆಗೆ
ಹೋಗುತ್ತೇನೆ" ಎನ್ನುತ್ತಾ ಆತ ನನ್ನ ಪಕ್ಕ ಬಂದು ನಿಂತ. ಒಂದು ಕ್ಷಣ ಇಬ್ಬರ ಕಂಗಳು ಸಂಧಿಸಿದವು.
ಮರುಕ್ಷಣವೇ ಇಬ್ಬರ ಮುಖದಲ್ಲೂ ನಗು ಆವರಿಸಿತು. ಕೆಂಪು ಮಣ್ಣಿನ ಆ ರಸ್ತೆಯಲ್ಲಿ ನಿಧಾನವಾಗಿ
ಇಬ್ಬರ ಹೆಜ್ಜೆಗಳು ಜೊತೆಜೊತೆಯಾಗಿ ಮೂಡತೊಡಗಿದವು. ಆಗಸದಲ್ಲಿ ಆಗ ತಾನೇ ಅರಳುತ್ತಿದ್ದ
ಬಿದಿಗೆಯ ಚಂದಿರ ತಿಳಿಬೆಳದಿಂಗಳ ನಗೆಯನ್ನು ಚೆಲ್ಲುತ್ತಿದ್ದ.

3 comments: