Tuesday, 19 November 2013

ಲಜ್ಜೆ

       
ಹೃದಯದಾಳದಲ್ಲಿ ಭದ್ರವಾಗಿ ಬೇರು ಬಿಟ್ಟು
ಕ್ಷಣ ಕ್ಷಣವೂ ಇಂಚು ಇಂಚಾಗಿ
ಹೊಸ ಕವಲುಗಳಲ್ಲಿ ಚಿಗುರುತ್ತ
ಮೈಮನಗಳನ್ನು ಗಾಢವಾಗಿ ಆವರಿಸಿ
ಬಿರಿದು ಅರಳಿ ನಿಂತಿದೆ ನಗುವಾಗಿ

ಮುಖದ ಬಿಳಿ ಪರದೆಯ ಮೇಲೆ
ಮೂಡುತಿದೆ ಹೊಸ ಕಿರಣಗಳ ಬೆಳಕು
ಬದಲಾಯಿಸುತ್ತ ಬಣ್ಣಗಳ ಅಂಗಿಯನ್ನು
ಬರೆಯುವುದು ಭಾವಗಳ ಚಿತ್ತಾರಗಳನ್ನು
ಮನದ ಏರಿಳಿತಗಳ ದಾಖಲಿಸುವಂತೆ

ಕನ್ನಡಿಯ ಮುಂದೆ ನಿಂತು
ಕಣ್ಣುಗಳಲ್ಲಿ ಕಣ್ಣಿಟ್ಟು ಈ ಮನಸು
ಪ್ರತಿಬಿಂಬದ ಬಿಂಬವನ್ನು ಸೆರೆಹಿಡಿಯುವಾಗ
ಗುಪ್ತವಾಗಿ ಜಾರುತ್ತಿದೆ ಹೃದಯ ಬಡಿತವು
ಸೋಲುವುದು ಈ ಉಸಿರು ಎದೆಯೊಳಗೆSaturday, 16 November 2013

ಅಂತರ್ಯುದ್ಧ

              
ಎಷ್ಟೋ ವರ್ಷಗಳೇ ಕಳೆದುಹೋದವಲ್ಲ
ಅವರಿಬ್ಬರ ನಡುವೆ ಯುದ್ಧ ಶುರುವಾಗಿ
ಯಾರು ಸರಿ ಯಾರು ತಪ್ಪು
ಎನ್ನುವುದಂತೂ ತೀರ ಸಿಗದ ಸಮುದ್ರಯಾನ
ಈಸುತ್ತಿದ್ದಾರೆ ಇಬ್ಬರೂ ಸಹ

ಅವ ಹೇಳುತ್ತಾನೆ ಇವನಿಗೆ
ಪ್ರತಿಯೊಂದು ಬಾಲ್ ಗೂ ಸಿಕ್ಸ್ ಹೊಡಿಯೋಣ
ಒಂದೊಂದೇ ರನ್ ತೆಗೆಯುವುದೇಕೆ
ಪಿಚ್ ನಲ್ಲಿ ಸುಮ್ಮನೆ ವಿಕೆಟ್ ಗಳ ಮಧ್ಯೆ ಓಟ

ಸಿಕ್ಸ್ ಆದರೆ ನಿಂತಲ್ಲೇ ಬಾರಿಸಬಹುದು
ಎತ್ತಲೂ ಓಡಬೇಕಾದ ಪ್ರಮೇಯವಿಲ್ಲ
ಪೂರ್ತಿ ಬಲ ಹಾಕಿ ಹೊಡೆದರೆ ಬಾಲ್ ಗೆ
ಹೋಗಲೇಬೇಕದು ಬೇಲಿಯ ದಾಟಿ
ಅಲ್ಲದೇ ಮ್ಯಾಚ್ ಕೂಡ ಬೇಗನೇ
ಮುಗಿದುಹೋಗುವುದು ಚಿಂತೆಯಿಲ್ಲ

ಇವ ಮಾತ್ರ ಅವನನ್ನು ವಿರೋಧಿಸುತ್ತಾನೆ
ಒಮ್ಮೆಲೇ ಆರು ರನ್ ಗಳಿಸುವ ವೇಗವೇಕೆ?
ಒಂದೊಂದೇ ಹೆಜ್ಜೆ ಇಡುತ್ತ
ಗಮ್ಯವನ್ನು ತಲುಪಿದರಾಗದೇ?

ನಿಂತಲ್ಲೇ ನಿಂತು ಸಿಕ್ಸ್ ಬಾರಿಸಿದರೇನು ಫಲ
ಚಲನೆಯಿಲ್ಲವೆಂದರೆ ಭೂಮಿಯು ಸತ್ತಂತೆ
ಪ್ರಯಾಸಪಟ್ಟು ಹೊಡೆಯುವುದೇಕೆ?
ಆರಾಮದಿಂದ ಒಂದೊಂದೇ ರನ್ ಗಳಿಸಿದರಾಯಿತಲ್ಲ
ಮ್ಯಾಚ್ ಮುಗಿಸುವ ಆತುರವೇಕೆ?
ಸಮಯದ ಮಿತಿಯೇ ತಿಳಿಯದಾದಾಗ

ಇಬ್ಬರಿಗೂ ಇಲ್ಲ ಔಟ್ ಆಗುವ ಭೀತಿ
ಯಾವ ರೀತಿ ಆಡಬೇಕೆಂಬುದೇ
ಬಗೆಹರಿಯದೇ ಉಳಿದಿರುವ ಗೊಂದಲ

Friday, 15 November 2013

ಕನಸು


ಕನಸು ಕಾಣು ಓ ಮನವೇ
ಕನಸಿರಬೇಕು ಕಣ್ಣಿನ ನೋಟಗಳಲ್ಲಿ
ಕನಸಿರಬೇಕು ಉಸಿರ ಬಿಸಿಯಲ್ಲಿ
ಕನಸಿರಬೇಕು ಹೃದಯದ ಪ್ರತಿ ಬಡಿತದಲ್ಲಿ
ಕನಸಿರಬೇಕು ಪ್ರತಿ ಸ್ಪರ್ಶದ ಹರ್ಷದಲ್ಲಿ
ಕನಸೇ ಎಲ್ಲರ ನಾಳೆಗಳ ಸೂತ್ರವು

ಕನಸೆಂದರೆ ಪುಟ್ಟ ಹಣತೆಗಳಂತೆ
ಕನಸುಗಳು ನೀಡುವವು ಭರವಸೆಯ ಬೆಳಕನ್ನು
ಕನಸುಗಳೆಂದರೆ ಮುತ್ತಿನ ಹಾರಗಳಂತೆ
ಕನಸು ತರುವುದು ಬದುಕಿಗೆ ಸಿರಿತನವನ್ನು
ಕನಸಿನ ಬಣ್ಣಗಳು ಸೇರಿದರೆ ಬಾಳಿನ ಚಿತ್ರಣ
ಕನಸಿನ ರಾಗಗಳೇ ಪ್ರತಿಯೊಬ್ಬರ ಮಿಡಿತ
ಕನಸೇ ಎಲ್ಲ ಜೇವಗಳ ತುಡಿತವು

ಕನಸಿಲ್ಲದ ಬದುಕದು ಕಗ್ಗತ್ತಲ ನಾಡಿನಂತೆ
ಕನಸಿಲ್ಲದಿದ್ದರೆ ಕಣ್ಣುಗಳಾಗುವವು ಕುರುಡು
ಕನಸಿಲ್ಲದ ಮನಸದು ಕಲ್ಲು ಬಂಡೆಯಂತೆ
ಕನಸಿರದ ಹೊರತು ಮೂಡದು ಹೊಸ ಚಿಗುರು
ಕನಸು ತರುವುದು ಜೀವನೋತ್ಸಾಹವನ್ನು
ಕನಸೇ ಜೇವ ಸೆಲೆಯ ಮೂಲವು

ಕನಸಾಗಬೇಕು ಪ್ರತಿ ಹೆಜ್ಜೆಗೆ ಸಾಥಿ
ಕನಸಾಗಬೇಕು ನಮ್ಮ ಬದುಕಿಗೆ ಸಾರಥಿ
ಕನಸಿನ ಕಿರಣಗಳು ನೀಡಲಿ ನಾಳೆಗೆ ಬೆಳಕು
ಕನಸು ನಡೆಸುವುದು ಕೈ ಹಿಡಿದು ಎಲ್ಲರನ್ನು
ಕನಸು ತೋರುವುದು ಗಮ್ಯದತ್ತ ದಾರಿಯನ್ನು
ಕನಸನ್ನು ನನಸಾಗುವತ್ತ ಸಾಗಬೇಕು ನಮ್ಮೆಲ್ಲರ ಹಾದಿ

Monday, 11 November 2013

ಏತಕೆ ಹೊಸದಾದ ಹುಚ್ಚು ಈ ಮನಕೆ
ಮತ್ತೆ ಮತ್ತೆ ಕಾಡುತಿದೆ ಅದೇ ಹಾಳು ಬಯಕೆ
ತುಡಿದಿದೆ ಮನವು ಆ ಹಿತವಾದ ಸ್ಪರ್ಶಕೆ
ಕರಗಿದೆ ಈ ತನುವು ಮೋಹದ ಬಿಸಿಗೆ||

ಚಂಚಲತೆಯ ಕೂಸಾಗಿದೆ ಈ ಜೀವವು
ಬೇರೆನನ್ನೂ ನೆನೆಯದು ಹುಚ್ಚುಮನವು
ಬಯಕೆಯ ಪಾಶಕ್ಕೆ ಸೋತುಹೋಗಿದೆ ಉಸಿರು
ಹಿಡಿತಕ್ಕೆ ಸಿಗದಾಗಿದೆ ಓಟದ ವೇಗವು||

ಆ ಬಾಹುಬಂಧನದ ಸಿಹಿಯಾದ ನೋವು
ಆ ಸಿಹಿಚುಂಬನದ ಮತ್ತಿನ ಕಾವು
ಬೇಕೆನ್ನಿಸಿದೆ ಮತ್ತೆ ಆ ರೋಮಾಂಚನವು
ತುಡಿಯುತಿದೆ ಈ ಹೃದಯ ಪ್ರತಿಕ್ಷಣವು||

ಬೇಯುತಿದೆ ಪ್ರತಿಉಸಿರು ನಿರೀಕ್ಷೆಯಲ್ಲಿ
ಹೇಳಲಾಗದ ಖುಷಿಯು ಈ ಅನಿಶ್ಚಿತತೆಯಲ್ಲಿ
ಕಳೆದುಹೋಗಲು ಬದುಕು ಈ ಭಾವದಲ್ಲಿ
ಧನ್ಯತೆಯ ನಿಟ್ಟುಸಿರು ಒಲವ ನೆನಪಲ್ಲಿ||

 

Thursday, 7 November 2013

ನಮ್ಮಿಬ್ಬರ ನಡುವೆ ಮೌನವೇ ಮಾತಾಗಿತ್ತು

                                
                "ಹ್ಞಂ..... ಥ್ಯಾಂಕ್ಸ್", ಆತ ಸಣ್ಣದಾಗಿ ಮುಗುಳ್ನಗುತ್ತಾ ಹೇಳಿದ. ನನ್ನ ಅಭಿನಂದನೆಗೆ
ಉತ್ತರವಾಗಿ.
                ಅಲ್ಲಿ ಮತ್ತೆ ಮೌನ ಹೆಪ್ಪುಗಟ್ಟಿತು. ಮುಂದೇನು ಮಾತಾಡಬೇಕೆನ್ನುವುದು ಇಬ್ಬರಿಗೂ ದೊಡ್ಡ
ಪ್ರಶ್ನೆಯಾಗಿ ಕಾಣುತ್ತಿತ್ತು. ಗೋಪಾಲಕೃಷ್ಣ ದೇವಾಲಯದ ಎದುರಿಗಿನ ದೇವರ ಹೊಳೆಯ ದಡದಲ್ಲಿನ
ಕಟ್ಟೆಯ ಮೇಲೆ ಎದುರುಬದುರಾಗಿ ಕುಳಿತಿದ್ದ ನಮ್ಮಿಬ್ಬರ ಮನದ ಕೊಳದಲ್ಲೂ ಹೇಳಲಾಗದ ಒಂದು
ಬಗೆಯ ಉದ್ವೇಗ - ಉತ್ಸಾಹಗಳ ಅಲೆಗಳು ಒಮ್ಮೆಲೇ ಎದ್ದು ಮರುಕ್ಷಣದಲ್ಲೇ ಮಾಯವಾಗಿ
ಆಟವಾಡುತ್ತಿದ್ದವು. ಹೊಳೆಯ ಹರಿವಿನ ಜುಳುಜುಳು ಸದ್ದು, ತಮ್ಮ ತಮ್ಮ ಗೂಡಿಗೆ ಮರಳುತ್ತಿರುವ
ಹಕ್ಕಿಗಳ ಕಲರವ, ಸಾಯಂಕಾಲವೆಲ್ಲ ತಮ್ಮದೇ ಎನ್ನುವಂತೆ ಚೀರುವ ಜೀರುಂಡೆಗಳ ಸಂಗೀತ, ಅನತಿ
ದೂರದಲ್ಲೇ ಇರುವ ರೋಡಿನಲ್ಲಿ ಚಲಿಸುವ ವಾಹನಗಳ ಭರಾಟೆ - ಇವೆಲ್ಲವೂ ನಮ್ಮಿಬ್ಬರ ನಡುವಿನ
ಮೌನ ಸಂಭಾಷಣೆಯನ್ನು ಆಸ್ವಾದಿಸುತ್ತಿರುವಂತೆ ತೆರೆಯ ಹಿಂದೆ ಸರಿದು ಕುಳಿತಂತಿದ್ದವು. ಒಂದು
ಬಗೆಯ ಅನಿರ್ವಚನೀಯ ಮೌನ ಆ ಮುಸ್ಸಂಜೆಯ ವೇದಿಕೆ ಮೇಲೆ ಲಾಸ್ಯವಾಡುತ್ತಿತ್ತು.
                 ಅಲ್ಲೇನೂ ಮಾತಿಗೆ ಬರವಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ಹೃದಯದಾಳದಲ್ಲೇ ಗೋಪುರ
ಕಟ್ಟಿದ್ದ ಸಾವಿರ ಕನಸುಗಳು, ಹಂಚಿಕೊಳ್ಳಬೇಕೆಂದಿದ್ದ ನೂರಾರು ಭಾವಗಳು, ವಿರಹದ ಬೇಗೆಯಲ್ಲೇ
ಬೆಂದು ಬಾಡಿ ಹೋಗಿದ್ದ ತುಡಿತ-ಮಿಡಿತಗಳು ಎಲ್ಲವೂ ಮಾತಿನ ರೂಪದಲ್ಲಿ ಹೊರಹೊಮ್ಮಲು
ತವಕಿಸುತ್ತಿದ್ದರೂ, ನಾಲಿಗೆಯ ತುದಿಯ ತನಕ ಮಾತ್ರ ತಲುಪಿ ತುಟಿಗಳ ಮೇಲೆ ಬರಲಾರೆನೆಂದು
ಚಿಕ್ಕಮಕ್ಕಳಂತೆ ಹಠ ಮಾಡುತ್ತಿದ್ದವು. ಅನಿರೀಕ್ಷಿತವಾಗಿ ಭೇಟಿಯಾದ್ದರಿಂದ ಅಮ್ಮೆಲೇ ಮೂಡಿದ
ಮಿಶ್ರಭಾವನೆಗಳ ಗೋಡೆಯು ಮಾತುಗಳ ಹರಿವಿಗೆ ಅಣೆಕಟ್ಟಿನಂತೆ ತಡೆಯಾಗಿ ನಿಂತಿತ್ತೇ ಎಂದು
ಯೋಚಿಸುವಂತಾಯಿತು.
              ಒಮ್ಮೆ ಆತ ಭೇಟಿಯಾದರೆ ಏನೇಲ್ಲ ಕೇಳಬೇಕು ಎಂದು ಪ್ರತಿದಿನವೂ ಹೊಸ ಹೊಸ ಪ್ರಶ್ನೆಗಳ
ಪಟ್ಟಿಯನ್ನು ತಯಾರಿಸುತ್ತಿದ್ದ ನಾನು ಅಂದು ಆತನ ಎದುರು ಮೌನಗೌರಿಯಾಗಿ ಕುಳಿತಿದ್ದೆ. ಆ ಕ್ಷಣದಲ್ಲಿ
ನನ್ನಲ್ಲಿನ ಭಾವಗಳ ಹೊಯ್ದಾಟಕ್ಕೆ ರೂಪ ನೀಡಲೇನೋ ಎಂಬಂತೆ ನನ್ನ ಬಲಗೈ ಕಟ್ಟೆಯ ಪಕ್ಕದಲ್ಲಿನ
ಹುಲ್ಲುಗಳನ್ನು ಕಿತ್ತುತ್ತಾ ಚಿತ್ತಾರ ಮೂಡಿಸಲು ಪ್ರಯತ್ನಿಸುವಂತಿತ್ತು. ಅವನ ಸ್ಥಿತಿಯೂ ಇದಕ್ಕೆ
ಹೊರತಾಗಿರಲಿಲ್ಲ. ಕೆಲವೊಮ್ಮೆ ಹೊಳೆಯ ಕಡೆ, ಇನ್ನು ಕೆಲವೊಮ್ಮೆ ಆಗಸವನ್ನು ಚುಂಬಿಸಲು
ಹೊರಟಿದ್ದ ಮರಗಳ ಕಡೆ ಚಲಿಸುತ್ತಿದ್ದ ಅವನ ಕಂಗಳು ಹೊಸ ಬಗೆಯ ಕವಿತೆಯೊಂದನ್ನು
ಹೊಸೆಯುತ್ತಿರುವಂತೆ ತೋರುತ್ತಿದ್ದವು. ನಮ್ಮಿಬ್ಬರ ಈ ತೊಳಲಾಟಕ್ಕೆ ಸಾಕ್ಷಿಯಾಗಿದ್ದ ಪ್ರಕೃತಿ ದೇವಿ
ಅದೆಷ್ಟು ಬಾರಿ ನಕ್ಕಳೋ ಏನೋ.
                ಚಳಿಗಾಲದ ದಿನವಾಗಿದ್ದರಿಂದ ನಿಧಾನವಾಗಿ ಕತ್ತಲೆ ಎಲ್ಲ ದಿಕ್ಕುಗಳಿಂದ ಆವರಿಸುತ್ತ ನಿಶೆಯ
ಆಗಮನವನ್ನು ಸಾರತೊಡಗಿತ್ತು. ಸಮಯ ಕೂಡ ೬.೩೦ ರ ಹತ್ತಿರ ಹತ್ತಿರದಲ್ಲಿತ್ತು.
"ಸಂಜೆಯಾಯಿತಲ್ಲವೇ, ಇನ್ನು ಹೊರಡೋಣ", ಎನ್ನುತ್ತಾ ಆತ ಎದ್ದು ನಿಂತ. ನಾನು ಹುಲ್ಲು
ಕೀಳುವುದನ್ನು ಬಿಟ್ಟು ಮೇಲೆದ್ದೆ. "ತಡವಾದರೆ ಮನೆಯ ಹಾದಿ ಕಾಣಲಿಕ್ಕಿಲ್ಲ. ಮತ್ತೊಮ್ಮೆ
ಭೇಟಿಯಾದಾಗ ಮಾತನಾಡೋಣ". ಆತನ ಈ ಮಾತಿಗೆ ಉತ್ತರವಾಗಿ ನಾನು ಬರೀ ಮುಗುಳ್ನಕ್ಕೆನಷ್ಟೆ.
ಇಬ್ಬರೂ ಚಪ್ಪಲಿಗಳನ್ನು ಹಾಕಿಕೊಳ್ಳುತ್ತಾ ಮನೆಯ ಹಾದಿಯ ಕಡೆ ಹೊರಳುತ್ತ ನಾಲ್ಕು ಹೆಜ್ಜೆ
ಸಾಗುವಷ್ಟರಲ್ಲಿಯೇ ಆತ ನನ್ನ ಹೆಸರನ್ನೊಮ್ಮೆ ಮೃದುವಾಗಿ ಕರೆದಂತಾಯಿತು. ನಾನು ಹಿಂತಿರುಗಿ ಏನು
ಎಂಬಂತೆ ಆತನತ್ತ ನೋಡಿದೆ. "ನಿನ್ನನ್ನು ಮನೆಯ ತನಕ ತಲುಪಿಸಿ ಆಮೇಲೆ ನಾನು ಮನೆಗೆ
ಹೋಗುತ್ತೇನೆ" ಎನ್ನುತ್ತಾ ಆತ ನನ್ನ ಪಕ್ಕ ಬಂದು ನಿಂತ. ಒಂದು ಕ್ಷಣ ಇಬ್ಬರ ಕಂಗಳು ಸಂಧಿಸಿದವು.
ಮರುಕ್ಷಣವೇ ಇಬ್ಬರ ಮುಖದಲ್ಲೂ ನಗು ಆವರಿಸಿತು. ಕೆಂಪು ಮಣ್ಣಿನ ಆ ರಸ್ತೆಯಲ್ಲಿ ನಿಧಾನವಾಗಿ
ಇಬ್ಬರ ಹೆಜ್ಜೆಗಳು ಜೊತೆಜೊತೆಯಾಗಿ ಮೂಡತೊಡಗಿದವು. ಆಗಸದಲ್ಲಿ ಆಗ ತಾನೇ ಅರಳುತ್ತಿದ್ದ
ಬಿದಿಗೆಯ ಚಂದಿರ ತಿಳಿಬೆಳದಿಂಗಳ ನಗೆಯನ್ನು ಚೆಲ್ಲುತ್ತಿದ್ದ.