Thursday, 20 June 2013

ಮತ್ತೆ ಮಳೆ ಹೊಯ್ಯುತಿದೆ.....

        
ಮತ್ತೆ ಮಳೆ ಹೊಯ್ಯುತಿದೆ
ಸಿಹಿ ಕ್ಷಣಗಳ ಹಳೇ ನೆನಪುಗಳಲ್ಲಿ
ವಿರಹದ ಬೇಸಿಗೆಯಲ್ಲಿ ಬೆಂದು ಬೆಂಡಾದ
ಈ ಮೈಮನಗಳಿಗೆ ತಂಪನ್ನೀಯುವಂತೆ
ಹನಿ ಹನಿಗಳ ಒಳಗೂ ಮಿಂಚಿ ಮಾಯವಾಗುತಿದೆ
ನಗುವ ನಿನ್ನ ಬಿಂಬದ ಪ್ರತಿಫಲನವು
ಭಾಸವಾಗುತಿದೆ ನನ್ನ ಅಣಕಿಸುವಂತೆ
ಒಂಟಿತನದ ಭೂತವು ನರ್ತಿಸಲು

ಅದೇಕೋ ಆ ಹುಚ್ಚು ಆಸೆ
ಎಲ್ಲ ಕೆಲಸವ ಬಿಟ್ಟು ಸುಮ್ಮನೆ
ಮನೆಯ ಜಗುಲಿಯ ಮೂಲೆಯಲ್ಲಿ ಕುಳಿತು
ಸುರಿವ ಮಳೆಯ ನೋಡುವ ಬಯಕೆ
ಹನಿಗಳ ಆ ಮೌನ ಸಿಂಚನವು
ನನ್ನ ಕಣ್ಣೀರಿಗೆ ನಿನ್ನ ಉತ್ತರವಾಗಿ
ಗುಡುಗು ಸಿಡಿಲುಗಳ ಆ ಆರ್ಭಟವು
ನನ್ನ ವಿರಹಗೀತೆಗೆ ನೀ ಪ್ರತಿಧ್ವನಿಸಿದಂತೆ

ಮಳೆಯ ರಾಗ ಕರೆಯುತಿದೆ
ನಿನ್ನ ಮಾಯೆ ಸೆಳೆಯುತಿದೆ
ಹನಿಗಳ ಸಿಂಚನದಲ್ಲಿ ಮೀಯುತ್ತ
ನಿನ್ನ ನೆನಪಲ್ಲಿ ತೇಲುವ ಕನಸು
ಮೈಮೇಲೆ ಬೀಳುವ ಹನಿಗಳ ತಂಪಲ್ಲಿ
ನಿನ್ನ ಹಿತ ಅಪ್ಪುಗೆಯ ಬಿಸಿ ಶಾಖವು
ರೋಮಾಂಚನ ಹಸಿ ಮೈ ತೊಯ್ದಾಗ
ಮುತ್ತಿನ ಮಳೆಯಲ್ಲಿ ನೆನೆದ ಸ್ಮೃತಿಯು


No comments:

Post a Comment