Saturday, 25 February 2012

ಸ್ನೇಹವೆಂದರೆ......


 
   ಸ್ನೇಹಪಥವೆಂಬುದು ಬರಿಯ ಹಾದಿಯಲ್ಲ ಗೆಳತಿ
   ಅದೊಂದು ಆಕಸ್ಮಿಕ ತಿರುವುಗಳ ಒಡತಿ
   ಪ್ರತಿಯೊಂದು ತಿರುವಿನಲ್ಲೂ ಸ್ವಾಗತಿಸುವುದು ಕ್ಷಣಕ್ಷಣವೂ
   ಮನಮೋಹಿಸುವ ಹೊಸ ಗಾನ ಶ್ರುತಿ
 
   ಯಾವ ರಾಗ ಯಾವ ತಾಳದೊಂದಿಗೆ ಸೇರುವುದೋ
   ಯಾವ ಭಾವ ಯಾರ ಮನದಲ್ಲಿ ಮೂಡುವುದೋ
   ಈ ಸಂಗೀತಮಯ ಪಯಣದ ಕೊನೆಯಲ್ಲಿ
   ಯಾವ ಗಾನದ ನೈಜ ಶ್ರುತಿ ಯಾರ ಸ್ವರದಲ್ಲಿ ಉಳಿಯುವುದೋ
 
    ತಿಳಿದವರಾರು ಇದರ ಗುಟ್ಟನ್ನು ಈ ಜಗತ್ತಿನಲ್ಲಿ
   ಅರ್ಥೈಸಲಾಗದು ಕೇವಲ ಮಾತು ಕತೆ ಕೄತಿಗಳಲ್ಲಿ
   ವರ್ಷಗಳು ಸರಿದರೂ ಯುಗಯುಗಗಳು ಕಳೆದರೂ
   ಉಳಿಯುವುದು ಬೆಚ್ಚನೆಯ ಭಾವವೊಂದೇ ಕೊನೆಯಲ್ಲಿ

Saturday, 11 February 2012

ಸವಿ ಸವಿ ನೆನಪು

   ನೆನಪುಗಳ ನೆನಪಲ್ಲಿ ನೆನಪಾದ ನೆನಪು
   ಹತ್ತರ ಜೊತೆ ಹನ್ನೊಂದು ನೂರೊಂದು ನೆನಪು
   ಮುಂಜಾನೆಯ ಹಕ್ಕಿಗಳ ಚಿಲಿಪಿಲಿಯಲ್ಲಿ
   ನಿನ್ನ ಪಿಸುಗುಟ್ಟುವಿಕೆಯ ನೆನಪು
   ರವಿಯ ಕಿರಣಗಳ ಬೆಳಕಿನಾಟದಲ್ಲಿ
   ನಿನ್ನ ಕಂಗಳ ಕಾಂತಿಯ ನೆನಪು
   ತರುಲತೆಗಳ ಎಳೆಯ ಹಸುರಿನಲ್ಲಿ
   ನಿನ್ನ ಬೆಚ್ಚನೆಯ ಉಸಿರ ನೆನಪು
   ಇಬ್ಬನಿ ತುಂಬಿದ ಕಾಲುಹಾದಿಯಲ್ಲಿ
   ನಿನ್ನೊಡನೆ ಹೆಜ್ಜೆಯನ್ನಿಟ್ಟ ನೆನಪು
   ತುಂಬು ನೀರಿನ ಹೊಳೆಯಂಚಿನಲ್ಲಿ
   ನಿನ್ನತ್ತ ಮನಸ್ಸು ಜಾರಿದ ನೆನಪು
   ತುಂತುರುವಿನ ಸೋನೆ ಮಳೆಯಲ್ಲಿ
   ನಿನ್ನ ಕಣ್ಣಹನಿಗಳ ನೆನಪು
   ಕೆಂಪು ರಂಗೇರಿದ ಮುಸ್ಸಂಜೆಯಲ್ಲಿ
   ನಿನ್ನ ಹುಸಿಮುನಿಸಿನ ನೆನಪು
   ಗೂಡಿಗೆ ಹಾರುವ ಹಕ್ಕಿಗಳ ಹಿಂಡಿನಲ್ಲಿ
   ನಿನ್ನ ದಾರಿ ಕಾದು ಕುಳಿತ ನೆನಪು
   ಹುಣ್ಣಿಮೆಯ ಇರುಳ ಬೆಳದಿಂಗಳಿನಲ್ಲಿ
   ನಿನ್ನ ಒಲವ ತಂಪಿನ ನೆನಪು
   ಮೋಹಕ ಆಗಸದ ಅಗಾಧ ವಿಸ್ತಾರದಲ್ಲಿ
   ನಾವಿಬ್ಬರೂ ಚುಕ್ಕಿಯಾದ ನೆನಪು