Sunday, 23 December 2012

ಹೀಗೊಂದು ಕತೆ.....

                                                       ಆಶು ಯಾಕೆ ಹಾಗೆ ಮಾಡಿದಳು?
ಈ ಪ್ರಶ್ನೆ ನಿನ್ನೆ ಮೊನ್ನೆಯದಲ್ಲ. ಕನಿಷ್ಠ ಆರು ತಿಂಗಳಂತೂ ಆಯ್ತು. ಆ shockನಿಂದಾಗಿ ನನಗಿನ್ನೂ ಚೇತರಿಸಿಕೊಳ್ಳಲಿಕ್ಕಾಗಿಲ್ಲ.
                     ಈ ಕಾರಣದಿಂದಾಗಿಯೇ ನಾನು friendshipನಲ್ಲಿ ನಂಬಿಕೆ ಕಳೆದುಕೊಂಡಿದ್ದೇ?
 ಇಲ್ಲ, ಉಳಿದವರು ಆಡಿದ ಆಟವೇನೂ ಕಡಿಮೆಯದಲ್ಲ. ದೂರದೂರವಿದ್ದರೇ ಸ್ನೇಹಬಂಧ ಇನ್ನೂ ಬಲಿಷ್ಠಗೊಳ್ಳಬಹುದೆಂದು ನಾನು ಅಂದುಕೊಂಡಿದ್ದು ಮಾತ್ರ ಸುಳ್ಳಾಯಿತು. ದಿನಕಳೆದಂತೆ ಎಲ್ಲ ದೂರವಾಗುತ್ತಲೇ ಬಂದರು.
                   ಮೊದಲು ಹತ್ತಿರವಾಗಿದ್ದವರಾದರೂ ಯಾರು?
                 ಖಂಡಿತವಾಗಿಯೂ ಅದು ಆಶುವೇ.
ನಾನೆಲ್ಲ ವಿಷಯಗಳನ್ನೂ ಅವಳಿಗೆ ಹೇಳುತ್ತಿದ್ದೆ. ಇಂಚು ಇಂಚನ್ನೂ ಬಿಡದೇ ಹೇಳುತ್ತಿದ್ದೆ. ಆಗ ನಮ್ಮಿಬ್ಬರ ಕನಸು, ಗುರಿ ಎಲ್ಲ ಒಂದೇ ಆಗಿದ್ದವು. ಯಾರಿಗೂ ಹೇಳದ ತನ್ನ ದುಃಖವನ್ನು ಅವಳಿಗೆ ನನ್ನ ಹತ್ತಿರ ಮಾತ್ರ ಹೇಳುವಷ್ಟು ಸಲುಗೆಯಿತ್ತು. ನನ್ನ ಮನೆಯವರಿಗಿಂತ ಹೆಚ್ಚಾಗಿ ನಾನು ಸ್ನೇಹವನ್ನು ನೆಚ್ಚಿಕೊಂಡಿದ್ದೇ.
                ನಾನು ಎಡವಿದ್ದು ಅಲ್ಲೇ ಇರಬೇಕು. ಅಥವಾ ಮೇಲಿನದೆಲ್ಲವೂ ಬರೀ ಅನಿಸಿಕೆಯಾ? ವಾಸ್ತವದಲ್ಲಿ ಹಾಗೆ ಇರಲೇ ಇಲ್ಲವಾ?
ಇಲ್ಲ, ನಾನು ಹೇಳಿದ್ದು ವಾಸ್ತವವೇ. ಆದರೆ ಅದು ಶಾಶ್ವತವಾಗಿರಬಹುದೆಂದು ನಾನು ಅಂದುಕೊಂಡದ್ದು ಮಾತ್ರ ನನ್ನ ಭ್ರಮೆ.
                 ಅದು ತಾತ್ಕಾಲಿಕವಾಗಿತ್ತು.
ಜೀವನದ ಗತಿಯೇ ಹಾಗಿತ್ತು. ಯಾರು ಯಾರು ಊರು ಬಿಟ್ಟು ಹೋದರೋ, ಮತ್ತಿನ್ಯಾರೋ ಅಲ್ಲಿ ಉಳಿದರು. ಬರೀ ಊರು ಬಿಟ್ಟಿದ್ದರೆ ಯಾವ ಬೇಸರವೂ ಇರಲಿಲ್ಲ. ಆದರೆ, ಅವರು ತಮ್ಮ ಅಸ್ತಿತ್ವವನ್ನೇ ಬಿಟ್ಟಿದ್ದರು.
                  ತನಗೆ ಯಾವಾಗಲೋ ಅದರ ವಾಸನೆ ಬಡಿದಿತ್ತು. ಅದು 3 idiots ನೋಡಲು ಹೋದಾಗ. phoneನಲ್ಲಿ ಆಶು ಹೇಳಿದ ಧಾಟಿಯೇ ಹಾಗಿತ್ತು. ತಾನು ಕರೆಯಲಿಲ್ಲವೆಂಬ ಆರೋಪ ಬರಬಾರದೆನ್ನುವ ಕಾರಣಕ್ಕೆ ಮಾತ್ರವೇ ಅವಳು ಕರೆದಿದ್ದಳು. ತನಗಾಗ ಹತ್ತಿರದಲ್ಲೇ ಇತ್ತು. ಆದರೂ ಅವರ ಭೇಟಿಯನ್ನು ಮಿಸ್ ಮಾಡಿಕೊಳ್ಳಲು ಮನಸ್ಸು ಸಿದ್ಧ ಇರಲಿಲ್ಲ. ಹಾಗಾಗಿಯೇ ಹೊಟ್ಟೆಯ ಹಸಿವನ್ನು ಲೆಕ್ಕಿಸದೇ ಅವರೊಂದಿಗೆ ಹೋದದ್ದು.
                        ಆದರೆ ಅವರಿಬ್ಬರ ಮುಖದಲ್ಲಿ ನಾನು ಬಂದುದರ ಕುರಿತಾಗಿ ಯಾವ ಸಂತಸದ ಕುರುಹುಗಳೂ ಇರಲಿಲ್ಲ. ನಿತ್ಯಾಳಂತೂ ಒಂದು ನಗೆ ಕೂಡ ಆಡಲಿಲ್ಲ. ಮಾತಂತೂ ದೂರವೇ ಉಳಿಯಿತು. ಆಶುನೇ ವಾಸಿ, ಕಂಡ ಕೂಡಲೇ ನಕ್ಕು ಸ್ವಲ್ಪ ಮಾತನಾಡಿದಳು. ಆದರೆ ಅದರಲ್ಲಿ ಸಹಜತೆ ಇತ್ತೋ ಕೄತ್ರಿಮತೆ ಇತ್ತೋ ಇಂದಿಗೂ ತನಗೆ ಅದರ ಅರಿವಿಲ್ಲ. ಹೋಗುವ ಹೊತ್ತಿಗೆ ಸಿನಿಮಾ ಆರಂಭವಾಗಿತ್ತು. ಮುಗಿಯುವ ಹೊತ್ತಿಗೆ ಎಲ್ಲರೂ ತಮ್ಮ ಹಾದಿ ಹಿಡಿದಾಗಿತ್ತು. ಸ್ನೇಹದ ಛಾಯೆ ಕೂಡ ಅಲ್ಲಿರಲಿಲ್ಲ.
                   ಹಿಂತಿರುಗಿ ಬಂದ ಕೂಡಲೇ ಅಪರಾಧಿ ಭಾವ ನನ್ನನ್ನು ಕಾಡುತ್ತಿತ್ತು. ಯಾಕಾದರೂ ಹೋಗಿದ್ದೆನೋ ಎಂದು. ಆ ತಕ್ಷ್ಣಣವೇ ನಾನು ಆ ಎರಡು ಕೋತಿಗಳಿಗೆ ಮಾಡಿದ್ದೆ. "3 idiots ಚೆನ್ನಾಗಿದೆ, ಖಂಡಿತ ನೋಡಿ. ಆ ಥರದ friends ಎಲ್ಲೂ ಸಿಕ್ಕೊದಿಲ್ಲ ಕಣ್ರೇ" ಎಂದಿದ್ದೆ. filmನಲ್ಲಿದ್ದವರು idiots ಅಲ್ಲವೋ ಎನೋ, ಹಿಂತಿರುಗಿ ಬರುವಷ್ಟರಲ್ಲಿ ನಾನು ನಿಜವಾಗಿ idiot ಆಗಿದ್ದೆ.
                  ಆದರೂ ನನಗೆ ಹುಚ್ಚು ಇಳಿದಿರಲೇ ಇಲ್ಲ. ಆಶು messageಗೆ reply ಮಾಡದಿದ್ದರೆ ತನಗೆಷ್ಟು ಸಿಟ್ಟು ಬರುತ್ತಿತ್ತು? ಆದರೆ ಒಮ್ಮೆಯೂ ಕೂಡ ತನಗೆ reply ಮಾಡಲು ಅವಳ್ಯಾರು ಎಂದು ಅನಿಸಿಯೇ ಇರಲಿಲ್ಲ. ಅವಳಾದರೂ ಅಷ್ಟೆ, ಎನಾದರೊಂದು ನೆಪ ಹೇಳಿ ತನ್ನ reply ಇಲ್ಲದಿದ್ದುಕ್ಕೆ ಕಾರಣ ಕೊಡುತ್ತಿದ್ದಳು. ನಾನಾದರೂ ಹೋಗಲಿ ಬಿಡು ಅಂತ ಅವಳನ್ನು ಕ್ಷಮಿಸಿಬಿಡುತ್ತಿದ್ದೆ.
                        ಆದರೆ ಅದು ಅವಳಿಗೆ ಕ್ಷಮೆಯಾ? ನನಗೆ ನಾನೇ ಮಾಡಿಕೊಳ್ಳುತ್ತಿದ್ದ ಸಮಾಧಾನವಾ?
ಎರಡೂ ಅಲ್ಲ, ಸ್ನೇಹವೆಂಬ ಹೆಸರಿನಲ್ಲಿ ಇಬ್ಬರೂ ತಮಗೆ ತಾವೇ ಮಾಡಿಕೊಂಡ ಮೋಸ.
                     ಇತ್ತೀಚೆಗೆ ಆಶುಳ ಮಾತಿನಲ್ಲಿ ವಿಜಯ ಬಹಳ ಬರುತ್ತಿದ್ದ. ಸದಾ ತಾನಯಿತು, ತನ್ನ ಓದಾಯಿತು ಎಂದಿರುತ್ತಿದ್ದ ಅವನು ಹುಡುಗಿಯರ ಹತ್ತಿರ ಅಷ್ಟು ಮಾತನಾಡುತ್ತಾನಾ? ನಿಜಕ್ಕೂ ಆಶ್ಚರ್ಯವಾಗಿತ್ತು. ಅದಕ್ಕಾಗಿಯೇ ಒಂದಿಬ್ಬರು friends ಬಳಿ ಆತನ ಕುರಿತು ಕೇಳಿಯೂ ಆಗಿತ್ತು. ಎಲ್ಲೂ ಕೊಂಕು ಮಾತು ಕೇಳಿ ಬಂದಿರಲಿಲ್ಲ. ಸವಿತಾ teacher ಕೂಡ ಹೇಳಿದ್ದರಲ್ಲವೇ "ಆ ಹುಡುಗನನ್ನು ಒಮ್ಮೆ ನೆನೆದರೆ ಸಾಕು ಮನಕ್ಕೆ ಎಷ್ಟೋ ತಂಪಾಗುತ್ತದೆ" ಎಂದು.
                     ಯಾವುದಕ್ಕಾದರೂ ಒಂದು ಮಿತಿಯಿರುತ್ತದಲ್ಲವೇ? ಅದನ್ನು ದಾಟಿದಾಗ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳೇಳುವುದು ಸಹಜ. ನನಗಾದದ್ದೂ ಅದೇ. ಧಾರವಾಡಕ್ಕೆ ಹೋಗುವಾಗ ಅಷ್ಟು ಬೆಳಗಿನ ಜಾವದಲ್ಲಿ ಅವನು ಆಶುಗೆ call ಮಾಡಿದಾಗ ನನ್ನ ಅನುಮಾನದ ಅಲೆ ಬಲವಾಗಿಯೇ ಎದ್ದಿತ್ತು. ಹೇಳಿಕೇಳಿ ಅವನು ನನ್ನ ಸೀನಿಯರ್. ಅದೂ ಅಲ್ಲದೇ ಅವತ್ತು ಅವನಿಗೆ preparatory exam. ಅಂಥವನು ಬೆಳಂಬೆಳಿಗ್ಗೆ ಅವಳಿಗ್ಯಾಕೆ ಫೋನ್ ಮಾಡಬೇಕಿತ್ತು?
                   ಅನುಮಾನ ಕೆಲವೊಮ್ಮೆ ಅಪಘಾತಕ್ಕೆ ಎಡೆಯಾಗುತ್ತದೆ. ಆದ್ದರಿಂದ ನನ್ನ ಅನುಮಾನದ ಅಲೆಯನ್ನು ಬಲವಾಗಿ ಮಟ್ಟ ಹಾಕಿದ್ದೆ. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಎನ್ನುವಂತೆ ಬಲವಾದ ಸಾಕ್ಷಿ ಬೇಕಿತ್ತು ನನಗೆ. ಅದಕ್ಕಾಗಿಯೇ ಕಾದೆ. ಸಮಯ ನನ್ನ ಬಹಳ ಕಾಯಿಸಲಿಲ್ಲ. ಮೂರು ತಿಂಗಳಲ್ಲೇ ಸತ್ಯ ತನ್ನನ್ನು ಅರ್ಪಿಸಿಕೊಂಡಿದ್ದಳು.
                 ಅವತ್ತು ಮಹಾಬಲೇಶ್ವರ ದೇವಸ್ಥಾನದ guest roomನಲ್ಲಿದ್ದಾಗ ಅದ್ಯಾವ ತಲೆಯಲ್ಲೋ ಎನೋ, ಅವಳ message box ನೋಡಿದೆ. ಆ ಕ್ಷಣದಿಂದ ನನಗೆ ಯಾವ ಥರದ ಸಂಕಟವಾಯಿತೆಂಬುದನ್ನು ಹೇಗೆಂದು ವಿವರಿಸಲಿ? ಬಲು ಆತ್ಮೀಯರೆಂದುಕೊಂಡವರ ಜೊತೆ ಒಂದು ರಾತ್ರಿ ಕಳೆಯುವುದೂ ಕಷ್ಟವಾಗಿ ತೋರಿತು. ಅದಕ್ಕಿಂತ ಹೆಚ್ಚಾಗಿ ಆಶುಳ ಮುಖ ನೋಡುವುದೇ ಕಷ್ಟವಾಯಿತು.
                     ಎಷ್ಟು ಚೆನ್ನಾಗಿ ನನ್ನನ್ನು ವಂಚಿಸಿದಳಲ್ಲ?
ಅಷ್ಟಾಗಿಯೂ ನಾನು ಅವಳಲ್ಲಿ ಬಯಸಿದ್ದು ಪಾರದರ್ಶಕತೆಯನ್ನು. ಅದನ್ನೇ ನೀಡದಾದಳು ಅವಳು.
                  close friend ಅನ್ನಿಸಿಕೊಂಡವಳು ತನ್ನ friend ಅನ್ನು ಶಂಕೆಗೊಳಪಡಿಸುವ ಸ್ಥಿತಿ ನಿಜಕ್ಕೂ ಅತ್ಯಂತ ನೋವಿನದ್ದು. ಮೊದಲನೆಯದಾಗಿ ತನ್ನ ಅನುಮಾನ ಸುಳ್ಳಾದಲ್ಲಿ ಅಪರಾಧಿಯಾದೆನೆಂಬ ಪಶ್ಚಾತ್ತಾಪ, ಎರಡನೆಯದಾಗಿ ತನ್ನ ಊಹೆ ನಿಜವಾದಲ್ಲಿ ಇನ್ನೂ ಏನೇನೂ ಆಘಾತಗಳು ಕಾದಿವೆಯೋ ಎಂಬ ಭಯ, ಕೊನೆಯದಾಗಿ ತನ್ನ ಅತ್ಮೀಯ ಗೆಳತಿಯನ್ನು ಕಳ್ಳನಂತೆ ಪರೀಕ್ಷಿಸಬೇಕಾದ ಪರಿಸ್ಥಿತಿಯನ್ನು ನೆನೆದು ನೋವು.
                  ಇವೆಲ್ಲದರ ಅರಿವು ಅವಳಿಗಿತ್ತಾ?
ಇಲ್ಲ, ತನ್ನ ಅರಿವೇ ಇಲ್ಲದವಳಿಗೆ ಪರರ ಅರಿವು ಏಕಿದ್ದಿತು? ಅಷ್ಟಕ್ಕೂ ಗೊತ್ತಾದ ಸತ್ಯದಿಂದ ನನಗೇಕೆ ಸಂಕಟವಾಗಬೇಕು?
               ಅವಳು ನನ್ನ ಹತ್ತಿರ ಒಂದು ಮಾತು ಹೇಳಬೇಕಿತ್ತು. ತನ್ನ ಹಾಗೂ ವಿಜಯ್ ನಡುವಿನ ಸಂಬಂಧದ ಕುರಿತು ಒಂದೇ ಒಂದು ಮಾತು ಹೇಳಬೇಕಿತ್ತು. ಆಗ ನಾನು ಈ ಪತ್ತೇದಾರಿ ಕೆಲಸಕ್ಕೆ ಕೈ ಹಾಕಬೇಕಾಗಿರಲಿಲ್ಲ. ಅಷ್ಟಕ್ಕೂ ಅದನ್ನು ಅಪೇಕ್ಷಿಸುವ ಹಕ್ಕು ತನಗಿತ್ತು.
                ಯಾಕೆಂದರೆ ತಾನವಳ ಗೆಳತಿಯಾಗಿದ್ದಳು.
ಒಂದು timeನಲ್ಲಿ ಯಾವನೋ propose ಮಾಡಿ greeting card ಕೊಟ್ಟು ಹೋದುದನ್ನು ಎಷ್ಟು ಭಯದಿಂದ ಹೇಳಿದ್ದಳು. ಮನೆಯಲ್ಲಿ ವಿಷಯ ಗೊತ್ತಾದರೆ....? ಈ ಪ್ರಶ್ನೆ ನನ್ನ ಮನಸ್ಸಿಗೆ ಬಂದಿರಲೇ ಇಲ್ಲ. ಅದ್ದರಿಂದಲೇ ಹಿಂದು ಮುಂದು ನೋಡದೇ ಆ cardನ್ನು ಸುಮಾರು ಒಂದು ವರ್ಷದ ಮಟ್ಟಿಗೆ ನನ್ನ ಮನೆಯಲ್ಲಿಟ್ಟುಕೊಂಡಿದ್ದೆ. ಆಕಸ್ಮಾತ್ ನನಗೇನಾದರೂ ಅಗಿದ್ದರೆ?
               ಈ ವಿಷಯವನ್ನು ಆಶು ಯೋಚಿಸಿದ್ದಳಾ?
ಅವತ್ತಿನ ಆಶುಗೂ, ಇವತ್ತಿನ ಆಶುಗೂ ಅದೆಷ್ಟು ವ್ಯತ್ಯಾಸ?
             ಆಗ ಅಂಥ ಸಹಾಯ ಮಾಡಿದವಳು ಈಗ ಅವಳ ಪ್ರೇಮಪಥಕ್ಕೆ ಎಂದಿಗೂ ಅಡ್ಡಿಯಾಗುತ್ತಿರಲಿಲ್ಲ. ಅಷ್ಟಕ್ಕೂ ನನಗೆ ಬಂದ ಪ್ರೇಮದ ಮೊದಲ ಅಹ್ವಾನದ ವಿಷಯವನ್ನು ನಾನು ಮೊದಲು ಹೇಳಿದ್ದು ಅವಳಿಗೆ ಅಲ್ಲವೇ? ಹಾಗಿರುವಾಗ ಅವಳು ನನಗೆ ಮೊದಲು ಬೇಡ, ಕೊನೆಯಲ್ಲಾದರೂ ಹೇಳಬೇಕಿತ್ತು ಅಂತ ಬಯಸಿದ್ದು ತಪ್ಪೇ?
                ಹೌದು, ಅವಳು ನನ್ನ ಗೆಳತಿಯಾಗಿ ಉಳಿದಿಲ್ಲ ಅಂಥ ನಾನು ಅರ್ಥ ಮಾಡಿಕೊಳ್ಳದಿದ್ದುದೇ ದೊಡ್ಡ ತಪ್ಪು.
               ಉಳಿದವರು ಏನೆನ್ನುತ್ತಾರೋ, ಆದರೆ ನಾನು ಹೇಳುತ್ತೇನೆ ಆಶು. ನೀನು ಮೊದಲಿನವಳಾಗಿಲ್ಲ ಆಶು, ನನಗೆ ಅರಗಿಸಿಕೊಳ್ಳಲಾಗದ ವಿಷಯವೆಂದರೆ ಅದೇ.
               ಓ ದೇವರೇ, ನನಗೆ ಆಶು ಮತ್ತೆ ಮೊದಲಿನವಳಾಗಿ ಸಿಗಲಾರಳಾ?
              ನಂಬಿದ್ದ ಆಶುವೇ ನಿಷ್ಠೆ ಬದಲಿಸುವಂಥಾದರೆ, ಇನ್ನು ನಿತ್ಯಾ, ಗೌರವ್, ಪ್ರತೀಕ್, ಅಕ್ಷತಾ, ಅಶ್ವಿತಾ, ಶ್ರೀಹರ್ಷ...... ಇವರದೆಲ್ಲ ಯಾವ ಲೆಕ್ಕ?
                   ಆವಾಗ ಮನಸ್ಸು ಒಂದೇ ಸಮನೆ ಕೇಳುತ್ತಿತ್ತು ಸ್ನೇಹವೆಂದರೆ ಇಷ್ಟೇನಾ?
ಹತ್ತು-ಹನ್ನೆರಡು ವರ್ಷಗಳಿಂದ ಒಟ್ಟಿಗೆ ಓದಿದರೂ collegeನಲ್ಲಿ ಶ್ರೀಹರ್ಷ ತನ್ನ ಸ್ನೇಹಿತರಾದ ಅಕ್ಷತಾ-ಅಶ್ವಿತಾರನ್ನು ಮಾತನಾಡಿಸುತ್ತಿರಲಿಲ್ಲವೆಂದಾಗ; ಬೆಳಿಗ್ಗೆ ಏನೂ ತಿನ್ನದೇ ಬಂದು classಲ್ಲಿ ಕೂತಾಗ "ಹಸಿವು ತಿನ್ನಲಿಕ್ಕೆ ಏನಾದರೂ ಕೊಡೆ" ಎಂದಾಗ class teacher ಹತ್ತಿರ ಹೇಳಿ ಆತನನ್ನು ಹೋಟೆಲಿಗೆ ಕಳಿಸಿ, ಆ ದಿನದ ನಂತರ ಯಾವಾಗಲೂ bagನಲ್ಲಿ ಅವನ ಸಲುವಾಗಿಯೇ ತಿನ್ನಲಿಕ್ಕೆ ಏನಾದರೂ ಇಟ್ಟುಕೊಳ್ಳುತ್ತಿದ್ದುದನ್ನು ಮರೆಯುವಷ್ಟು ವಿನಯ್ ಕೃತಘ್ನನಾದಾಗ; ಕಳೆದ ವರ್ಷ ಮನೆಯಲ್ಲಿ ಆಲೆಮನೆ ನಡೆದಾಗ ಕಬ್ಬಿನ ಹಾಲನ್ನು ಇಡೀ classಗೆ ಹಂಚಿದ್ದ ವಿನಯ್ ಈ ವರ್ಷ ಯಾರಿಗೂ ಆಲೆಮನೆಯ ವಿಷಯವನ್ನೇ ಹೇಳದೇ ಹೋದಾಗ; ಮಗುವಿನ ಬುದ್ಧಿ ಅಂದುಕೊಂಡಿದ್ದ ವಿಭಾ ಸಹ ಅಡ್ಡದಾರಿ ಹಿಡಿದಾಗ; ಒಳ್ಳೆಯದಕ್ಕೆ ಅಂತ ಎಷ್ಟು ಕಿವಿಮಾತನ್ನು ತಿದ್ದಿ ಹೇಳಿದರೂ ಅದನ್ನು ಗೌರವ್ ಕಾಲಕಸಕ್ಕಿಂತ ಹೆಚ್ಚು ನಿಕೃಷ್ಟವಾಗಿ ಕಂಡಾಗ; ಯಾವತ್ತೂ ಆಶು ಆಶು ಅನ್ನುತ್ತಿದ್ದ ನಿತ್ಯಾ ಅವಳಿಗೂ ಸಹ ಒಂದು ಮಾತು ಹೇಳದೆ ವಿನಯ್ ಮನೆಗೆ ಹೋದಾಗ; ಒರಟನೆನಿಸಿದರೂ ಒಳ್ಳೆಯವನೆಂದುಕೊಂಡಿದ್ದ ಪ್ರತೀಕ್ ಕೂಡ ಸುಳ್ಳು ಹೇಳುತ್ತಾನೆಂದು ಗೊತ್ತಾದಾಗ; ಇನ್ನೂ ಹತ್ತು ಹಲವು ಸಹ ತನಗೆ ಅನ್ನಿಸಿತ್ತಲ್ಲವೇ?
                  ಇದೇನಾ ಸ್ನೇಹ?
ಅಥವಾ ತನಗೆ ಮಾತ್ರ ಹಾಗೆನ್ನಿಸಿತೋ? ಯಾವುದೇ ವಿಷಯದ ಕುರಿತಾಗಿ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯವಿರುತ್ತದೆ. ಯಾಕೆಂದರೆ ಅವು ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತವೆ. ಬೇರೆಯವರಿಗೆ ಸರಿ ಎನ್ನಿಸಿದ್ದು ತನಗೆ ತಪ್ಪು ಅಂತ ಅನ್ನಿಸಲೂಬಹುದು. ಮತ್ತೊಬ್ಬರಿಗೆ ಕಾಣಿಸದ ಕೆಲವು ಲೋಪದೋಷಗಳು ತನಗೊಂದೇ ಗೋಚರಿಸಲೂಬಹುದು.
                 ಬಹುಶಃ ಇಲ್ಲಿಯೂ ಹಾಗೆ ಆಯಿತು ಅನ್ನಿಸುತ್ತದೆ.
ಬೇರೆಯವರ ತಪ್ಪುಗಳನ್ನು ಮೇಲ್ನೋಟಕ್ಕೆ ಕ್ಷಮಿಸಬಹುದಾದರೂ, ಮನಸ್ಸಿಗಾದ ಗಾಯದ ಕಲೆ ಯಾವತ್ತೂ ಅಳಿಸಿಹೋಗಲಾರದು. ಎದೆಯಲ್ಲಿ ನೋವನ್ನಿಟ್ಟುಕೊಂಡು ಮುಖದ ಮೇಲೆ ನಗು ತಂದುಕೊಳ್ಳುವುದು ತನ್ನಿಂದಾಗದು. ಅದು ತನ್ನ ಸ್ವಭಾವಕ್ಕೆ ವಿರುದ್ಧ.
                ಹಳೆಯದನ್ನೆಲ್ಲ ಚಿಂತಿಸುತ್ತ ಕೂತರೆ ದಾರಿ ಸಾಗದೆಂಬುದನ್ನು ಅರಿತೂ ಕೂಡ ಮನಸ್ಸು ಕೆಲವೊಮ್ಮೆ ನೆನಪಿನ ಕದ ತೆರೆದೂ ಕೂರುತ್ತದೆ. ಆಮೇಲೆ ತನಗೆ ತಾನೇ ಸಮಾಧಾನಪಟ್ಟುಕೊಳ್ಳುತ್ತದೆ. "YOU SHOULD MOVE"
ಸ್ನೇಹಿತರು ಮಾತ್ರವಲ್ಲ. ಬಂಧು-ಬಳಗವೂ ಹೀಗೆ ಅನ್ನಿಸಿಬಿಡುತ್ತದೆ. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿಯೇ ಹತ್ತಿರ ಬರುತ್ತಾರೆನೋ ಎಂದೆನಿಸತೊಡಗುತ್ತದೆ. ಆದರೂ ನಾನು ಬದುಕಬೇಕಾದದ್ದು ಇದೇ ವ್ಯವಸ್ಥೆಯಲ್ಲೇ ಅಲ್ಲವೇ? ವಿವೇಕ ಎಚ್ಚರಿಸುತ್ತದೆ ಸಣ್ಣದೊಂದು ಮುಗುಳುನಗೆ ಮಿಂಚಿ ಮಾಯವಾಗುತ್ತದೆ, ಮನಸ್ಸು ಹೇಳುತ್ತದೆ "ಮಗಾ, life ಇಷ್ಟೆನೇ".
                ಇವೆಲ್ಲವುಗಳ ನಡುವೆಯೂ ಕೆಲವರು ಜೀವನದಲ್ಲಿ ಬರುತ್ತಾರೆ. ಮರಳುಗಾಡಿನಲ್ಲಿ oasisನಂತೆ, ಕತ್ತಲಕೋಣೆಯಲ್ಲಿ ಉರಿಯುವ ಪುಟ್ಟ ಹಣತೆಯಂತೆ, ಬಿಸಿಲಿಗೆ ಬೆಂಡಾಗಿದ್ದ ಭೂತಾಯಿಗೆ ತಂಪು ನೀಡುವ ವರ್ಷದ ಮೊದಲ ಮಳೆಯಂತೆ.
ಹೌದು, ಅವರೇನೂ ತನ್ನ ರಕ್ತಸಂಬಂಧಿಗಳಲ್ಲ. ಜನ್ಮಜನ್ಮದ ನಂಟೂ ಇಲ್ಲ. ಆದರೆ ಅವರಿಂದ ದೊರೆತ ಮಧುರ ಕ್ಷಣಗಳ ಋಣ ತನ್ನಲ್ಲಿಯೇ ಉಳಿದುಬಿಡುತ್ತದೆ. ಖುಷಿ ನೀಡದಿದ್ದರೂ ಪರವಾಗಿಲ್ಲ, ದುಃಖ ನೀಡಿ ಮನ ನೋಯಿಸಲಾರೆ ಎನ್ನುವ ಮನೋಭಾವದವರು.
                  ಸಂಬಂಧಗಳೇ ಹಾಗೆ. ತಮಗರಿವಿಲ್ಲದಂತೆ ನಂಟು ಗಂಟಾಗುತ್ತದೆ. ಕೆಲವು ಗಂಟುಗಳು ತಾನಾಗೇ ಕಳಚಿದರೆ ಮತ್ತೆ ಕೆಲವು ಬಿಡಿಸಲಾಗದೆ ಹರಿದೇ ಹೋಗುತ್ತವೆ.
                ಮೊನ್ನೆಮೊನ್ನೆಯವರೆಗೆ ಅತ್ಮೀಯಳೆನಿಸುವವಳು ನಾಳೆ "ಓ, ಅವಳಾ" ಎನ್ನುವಂತಾಗಿರುತ್ತಾಳೆ. ಬಾಳ ಪಯಣದಲ್ಲಿ ಅಪಘಾತ, ಆಘಾತಗಳ ನಡುವೆಯೂ ಒಂದಿಲ್ಲೊಂದು ಸಂತೋಷದ ರಸಘಳಿಗೆ ಇದ್ದೇ ಇರುತ್ತದೆ. ಕೆಲಕ್ಷಣ ಮೈ ಮನ ತಟಸ್ಥವಾದರೂ ಮರುಕ್ಷಣವೇ ಚೇತರಿಸಿಕೊಂಡು ಕಾರ್ಯಮಗ್ನವಾಗುತ್ತದೆ.
                ಇವೆಲ್ಲವುಗಳ ನಡುವೆ ಒಂದು ಕ್ಷಣವು ವಿರಾಮವಿಲ್ಲದೇ ನಿರಂತರವಾಗಿ ಸಾಗುತ್ತಲೇ ಇರುತ್ತದೆ.
                          ಅದು ಕಾಲಚಕ್ರ!!!!
      ಯಾವತ್ತೂ ನಿಲ್ಲದ ಓಟ ಅದರದ್ದು. ಹಳೆಯ ನೆನಪುಗಳನ್ನು ಹೊಸಕಿ ಹಾಕಿ ಭವಿಷ್ಯದ ಕನಸುಗಳತ್ತ ಮನುಷ್ಯನನ್ನು ಓಡಿಸುತ್ತದೆ, ಜೊತೆಯಲ್ಲಿ ತಾನೂ ಓಡುತ್ತದೆ. ದಿನದಿನವೂ ಹೊಸ ಹೊಸ ಜಗತ್ತಿನಲ್ಲಿ ಪಯಣಿಸುತ್ತದೆ. ಅಂತೆಯೇ ಹಳತೆನ್ನುವುದೆಲ್ಲ ನೆನಪೆನ್ನುವ ಗೋದಾಮಿನ ಸರಕುಗಳಾಗುತ್ತವೆ. ನಿಧಾನವಾಗಿ ಹಳೆಯ ಸರಕು ಖಾಲಿಯಾಗಿ ಹೊಸತರ ಜಮೆಯಾಗುತ್ತದೆ. ಇರುವಷ್ಟು ದಿನ ಬೆಂಬಿಡದೆ ಕಾಡಿದ್ದ, ಯಾಕಾದರೂ ಹುಟ್ಟಿದಳೋ ಅನ್ನಿಸುವಷ್ಟು ಕಿರಿಕಿರಿ ನೀಡಿದ್ದ ತಾನು ಕೂಡ ಶಾಶ್ವತವಾಗಿ ಮರೆಯಾಗುತ್ತಾಳೆ.





Wednesday, 12 December 2012



ಕ್ಷಮಿಸಲೆಂತು ನಾ ಗೆಳತಿ?
ಮನದಲ್ಲಿ ಮಧುರ ವೀಣೆಯನ್ನು ಮೀಟಿ
ಹೃದಯದಲ್ಲಿ ಮೋಹದ ಕಿಡಿ ಹೊತ್ತಿಸಿ
ಭಾವನೆಗಳ ಕೊಳದಲ್ಲಿ ಜೊತೆಯಾಗಿ ಈಸಿ
ಒಡಲಾಳದಲ್ಲಿ ಹುಚ್ಚು ಬಯಕೆ ಹುಟ್ಟಿಸಿ
ಒಲವು ಅರಳುವ ಮುನ್ನವೇ ಕಾರಣವಿಲ್ಲದೇ
ನನ್ನತ್ತ ಹಿಂತಿರುಗಿ ನೋಡದೇ ಹೋದವನ......

ನೀನೆಂದರೆ....


ನೀ ನಡೆದರೆ.....
ಅರಳುವುದು ಹೂವು ಹೆಜ್ಜೆಗುರುತುಗಳಲ್ಲಿ
ಚೆಲ್ಲುವುದು ಸುಗಂಧವ ಇಕ್ಕೆಲಗಳಲ್ಲಿ
ಸುಮ್ಮನೇ ಹೆಜ್ಜೆಹಾಕಲು ಅದೇ ಹಾದಿಯಲ್ಲಿ
ಸಿಗಬಾರದೇಕೆ ನೀನಾಗ ನನ್ನ ಜೊತೆಯಾಗಿ?


ನೀ ನಕ್ಕರೆ.....
ಮೂಡುವುದು ಕೋಲ್ಮಿಂಚು ನಯನಗಳಲ್ಲಿ
ಸೂಸುವುದು ಜೇನಸಿಹಿ ಅಧರಗಳಲ್ಲಿ
ಸುಮ್ಮನೇ ನಗಲು ಮನ ಒಲವ ಸ್ಮೃತಿಯಲ್ಲಿ
ಇರಬಾರದೇಕೆ ನೀನಾಗ ನನ್ನ ಬದಿಯಾಗಿ?


ನೀ ನುಡಿದರೆ.....
ಹೊಮ್ಮುವುದು ಕೋಗಿಲೆ ನಾದ ಸ್ವರಗಳಲ್ಲಿ
ಪ್ರತಿಧ್ವನಿಸುವುದು ಎಲ್ಲ ದಿಶೆಗಳಲ್ಲಿ
ಸುಮ್ಮನೇ ನಾ ಮಾತನಾಡಲು ಮನಸ್ಸಿನಲ್ಲಿ
ನಿಲ್ಲಬಾರದೇಕೆ ನೀನಾಗ ನನ್ನ ಎದುರಾಗಿ?

Sunday, 26 August 2012

ವಿರಹ


ಅಳೆಯಲಾಗದು ಏಕೆ?
ಭಾವ ಬಯಕೆಯ ತಾಪವನ್ನು
ಹೊತ್ತಿ ಉರಿಯುವ ನಯನಗಳಲ್ಲಿ
ಆರಿಹೋಗದು ರೆಪ್ಪೆಯ ಚಲನೆಗೆ
ಸೋಕದಾಯಿತು ಹೇಗೆ?
ಕಿಡಿ ಹೊತ್ತಿಸಿ ಕಿಚ್ಚು ಹೆಚ್ಚಿಸಿದವನ
ತನುಮನ ಕರಗುತ್ತಿರುವಾಗ
ದೂರನಿಂತು ನೋಡುವ ಪರಿಯೆಂತು?
ಶಮನಗೊಳ್ಳುವ ಮಾತೆಲ್ಲಿಯದು
ಸುಪ್ತಕುಂಡದಲಿ ಜ್ವಾಲಾಕಣದ ಶೇಷ
ಹೊತ್ತಿಸಲಿ ವಿರಹದ ದೀವಿಗೆಯ
ಆತ್ಮಚೇತನದ ದಿವ್ಯ ಆರಾಧನೆಗೆ
ಕಾಲಗರ್ಭದಲ್ಲಿನ ಜ್ವಾಲಾಮುಖಿಯಾಗಿ
ಜನ್ಮಜನ್ಮಕೂ ಸ್ಫೋಟಗೊಂಡು
ಜೀವದುಸಿರಲ್ಲಿ ಲೀನವಾಗಿ
ಶಾಂತಗೊಳ್ಳುವ ಘಳಿಗೆಯೆಂದು?

Saturday, 25 February 2012

ಸ್ನೇಹವೆಂದರೆ......


 
   ಸ್ನೇಹಪಥವೆಂಬುದು ಬರಿಯ ಹಾದಿಯಲ್ಲ ಗೆಳತಿ
   ಅದೊಂದು ಆಕಸ್ಮಿಕ ತಿರುವುಗಳ ಒಡತಿ
   ಪ್ರತಿಯೊಂದು ತಿರುವಿನಲ್ಲೂ ಸ್ವಾಗತಿಸುವುದು ಕ್ಷಣಕ್ಷಣವೂ
   ಮನಮೋಹಿಸುವ ಹೊಸ ಗಾನ ಶ್ರುತಿ
 
   ಯಾವ ರಾಗ ಯಾವ ತಾಳದೊಂದಿಗೆ ಸೇರುವುದೋ
   ಯಾವ ಭಾವ ಯಾರ ಮನದಲ್ಲಿ ಮೂಡುವುದೋ
   ಈ ಸಂಗೀತಮಯ ಪಯಣದ ಕೊನೆಯಲ್ಲಿ
   ಯಾವ ಗಾನದ ನೈಜ ಶ್ರುತಿ ಯಾರ ಸ್ವರದಲ್ಲಿ ಉಳಿಯುವುದೋ
 
    ತಿಳಿದವರಾರು ಇದರ ಗುಟ್ಟನ್ನು ಈ ಜಗತ್ತಿನಲ್ಲಿ
   ಅರ್ಥೈಸಲಾಗದು ಕೇವಲ ಮಾತು ಕತೆ ಕೄತಿಗಳಲ್ಲಿ
   ವರ್ಷಗಳು ಸರಿದರೂ ಯುಗಯುಗಗಳು ಕಳೆದರೂ
   ಉಳಿಯುವುದು ಬೆಚ್ಚನೆಯ ಭಾವವೊಂದೇ ಕೊನೆಯಲ್ಲಿ

Saturday, 11 February 2012

ಸವಿ ಸವಿ ನೆನಪು

   ನೆನಪುಗಳ ನೆನಪಲ್ಲಿ ನೆನಪಾದ ನೆನಪು
   ಹತ್ತರ ಜೊತೆ ಹನ್ನೊಂದು ನೂರೊಂದು ನೆನಪು
   ಮುಂಜಾನೆಯ ಹಕ್ಕಿಗಳ ಚಿಲಿಪಿಲಿಯಲ್ಲಿ
   ನಿನ್ನ ಪಿಸುಗುಟ್ಟುವಿಕೆಯ ನೆನಪು
   ರವಿಯ ಕಿರಣಗಳ ಬೆಳಕಿನಾಟದಲ್ಲಿ
   ನಿನ್ನ ಕಂಗಳ ಕಾಂತಿಯ ನೆನಪು
   ತರುಲತೆಗಳ ಎಳೆಯ ಹಸುರಿನಲ್ಲಿ
   ನಿನ್ನ ಬೆಚ್ಚನೆಯ ಉಸಿರ ನೆನಪು
   ಇಬ್ಬನಿ ತುಂಬಿದ ಕಾಲುಹಾದಿಯಲ್ಲಿ
   ನಿನ್ನೊಡನೆ ಹೆಜ್ಜೆಯನ್ನಿಟ್ಟ ನೆನಪು
   ತುಂಬು ನೀರಿನ ಹೊಳೆಯಂಚಿನಲ್ಲಿ
   ನಿನ್ನತ್ತ ಮನಸ್ಸು ಜಾರಿದ ನೆನಪು
   ತುಂತುರುವಿನ ಸೋನೆ ಮಳೆಯಲ್ಲಿ
   ನಿನ್ನ ಕಣ್ಣಹನಿಗಳ ನೆನಪು
   ಕೆಂಪು ರಂಗೇರಿದ ಮುಸ್ಸಂಜೆಯಲ್ಲಿ
   ನಿನ್ನ ಹುಸಿಮುನಿಸಿನ ನೆನಪು
   ಗೂಡಿಗೆ ಹಾರುವ ಹಕ್ಕಿಗಳ ಹಿಂಡಿನಲ್ಲಿ
   ನಿನ್ನ ದಾರಿ ಕಾದು ಕುಳಿತ ನೆನಪು
   ಹುಣ್ಣಿಮೆಯ ಇರುಳ ಬೆಳದಿಂಗಳಿನಲ್ಲಿ
   ನಿನ್ನ ಒಲವ ತಂಪಿನ ನೆನಪು
   ಮೋಹಕ ಆಗಸದ ಅಗಾಧ ವಿಸ್ತಾರದಲ್ಲಿ
   ನಾವಿಬ್ಬರೂ ಚುಕ್ಕಿಯಾದ ನೆನಪು

Wednesday, 25 January 2012

MY HAI........

                        HAI,
                                  this is your friend.... want to share my views, thoughts.......... so, all of you are welcome to my world of SWIRLY THOUGHTS.........
                                                        see you soon.........
                                                                         take care............
                                                                                      bye..............